ಚುಂಚನಕಟ್ಟೆ -
	ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲ್ಲೂಕಿನ ಒಂದು ಹೋಬಳಿ; ಕುಪ್ಪೆ ಗ್ರಾಮಪಂಚಾಯಿತಿಗೆ ಒಳಪಟ್ಟ ಒಂದು ಯಾತ್ರಾ ಸ್ಥಳ. ಕಾವೇರಿ ನದಿಯ ದಡದಲ್ಲಿದೆ.

	ಶ್ರೀರಾಮಭಕ್ತನಾದ ಚುಂಚ ಎಂಬ ಋಷಿ ಇಲ್ಲಿದ್ದನೆಂದೂ ಈ ಸ್ಥಳಕ್ಕೆ ಅವನ ಹೆಸರೇ ಬಂದಿದೆಯೆಂದೂ ಶ್ರೀರಾಮ ಅರಣ್ಯವಾಸದಲ್ಲಿದ್ದಾಗ ಸೀತೆ ಲಕ್ಷ್ಮಣ ಸಮೇತನಾಗಿ ಇಲ್ಲಿಗೆ ಬಂದಿದ್ದನೆಂದೂ ಸ್ಥಳಪುರಾಣ ಹೇಳುತ್ತದೆ. ಚುಂಚನಕಟ್ಟೆಯ ಬಳಿ ಕಾವೇರಿ ನದಿ 60-80 ಎತ್ತರದಿಂದ ಧುಮುಕುತ್ತದೆ. ಪ್ರವಾಹದ ಕಾಲದಲ್ಲಿ ಈ ಜಲಪಾತ ರಮ್ಯವಾಗಿ ಕಾಣುತ್ತದೆ. ಜಲಪಾತದ ಬಳಿಯಲ್ಲೆ, ನದಿಯ ಬಲದಂಡೆಯ ಮೇಲೆ, ಶ್ರೀ ಕೋದಂಡರಾಮನ ದೇವಾಲಯವಿದೆ. ಇದು ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನ. ಇವರ ದೊಡ್ಡ ಪ್ರಾಕಾರವನ್ನು ಮುಮ್ಮಡಿ ಕೃಷ್ಣರಾಜ ಒಡೆಯರು ಕಟ್ಟಿಸಿದರು. ದೇವಾಲಯ ಸಾಮಾನ್ಯವಾದ್ದು. ವರ್ಣರಂಜಿತ ಭಿತ್ತಿ ಪ್ರಾಕಾರದ ಒಳಗೆ 1932ರಲ್ಲಿ ಕಟ್ಟಲಾದ ಕಲ್ಯಾಣ ಮಂಟಪದಲ್ಲಿ ದಶಾವತಾರ ಚಿತ್ರಗಳಿವೆ. ದೇವಾಲಯದ ಪ್ರವೇಶ ದ್ವಾರದ ಎಡ ಬಲ ಗೋಡೆಗಳಲ್ಲಿ ನಾಗಬಂಧದ ಶಿಲಾಫಲಕಗಳಿವೆ. ದೇವಾಲಯದ ಸುತ್ತಲೂ ಅನೇಕ ಪುಟ್ಟ ಮಂಟಪಗಳೂ ದೇವಾಲಯದ ಎದುರು ಒಂದು ಸುಂದರವಾದ ಕಲ್ಯಾಣ ಮಂದಿರವೂ ಉಂಟು.

	ಜಲಪಾತದ ತಲೆಯ ಬಳಿಯಿಂದ ಸ್ವಲ್ಪ ಮೇಲೆ ಕಾವೇರಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿದೆ. ಈ ಸೇತುವೆಗೆ ಉತ್ತರದಲ್ಲಿ ಇರುವುದು 1091 ಉದ್ದದ ರಾಮಸಮುದ್ರ ಅಣೆಕಟ್ಟು. ಈ ಅಣೆಕಟ್ಟಿನಿಂದ ಹೊರಡುವ ರಾಮಸಮುದ್ರ ನಾಲೆಯ ಉದ್ದ 60 ಕಿ.ಮೀ. ಇದು. ಕೃಷ್ಣರಾಜನಗರದವರೆಗೆ ಹೋಗುತ್ತದೆ. ಇದರ ಅಚ್ಚುಕಟ್ಟು 5,808 ಎಕರೆಗಳು, ಅಣೆಕಟ್ಟೆಯನ್ನೂ ನಾಲೆಯನ್ನೂ ಚಿಕ್ಕದೇವರಾಜ ಒಡೆಯರು ನಿರ್ಮಿಸಿದರು. ಸುಮಾರು 100 ದೂರದಲ್ಲಿ ಇನ್ನೊಂದು ಅಣೆಕಟ್ಟು ಇದೆ. ಇದರ ಎಡದಂಡೆಯಿಂದ ಹೊರಡುವ ಮಿರ್ಲೆ ನಾಲೆ ಒಂದು ಮೈಲಿ ದೂರ ಪ್ರವಹಿಸಿದ ಅನಂತರ ಮೂಲನಾಲೆ, ಹೊಸನಾಲೆ ಮತ್ತು ಅತಿಕಟ್ಟೆನಾಲೆ (10 ಕಿ.ಮೀ. ಉದ್ದ) ಎಂಬ ಮೂರು ಶಾಖೆಗಳಾಗಿ ಒಡೆಯುತ್ತದೆ. ಮುಂದೆ ಈ ಕವಲುಗಳು ಒಂದು ಕಣಿವೆಯಲ್ಲಿ ಒಂದುಗೂಡುತ್ತವೆ. ಅಲ್ಲಿಂದ ಮುಂದೆ ಇದು ಹಂಪಾಪುರದ ನಾಲೆ ಎಂಬ ಹೆಸರು ಪಡೆದು 26 ಕಿ.ಮೀ. ದೂರ ಮುಂದುವರಿದು ಗುಳ್ಳಿಗೆ ಕೆರೆಯಲ್ಲಿ ಸೇರುತ್ತದೆ. ಬಲ ದಂಡೆಯ ಕಡೆ ಚಾಮರಾಜನಾಲೆಯನ್ನು ನಿರ್ಮಿಸಲಾಗಿದೆ.

	ಪ್ರತಿವರ್ಷ ಜನವರಿ ತಿಂಗಳಲ್ಲಿ ಚುಂಚನಕಟ್ಟೆಯಲ್ಲಿ ರಾಮದೇವರ ರಥೋತ್ಸವದ ಸಂದರ್ಭದಲ್ಲಿ ಒಂದು ದೊಡ್ಡ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಸೇರುವ ದನಗಳ ಪರಿಷೆಗೆ ನೂರಾರು ಕಿ.ಮೀ.ಗಳಿಂದ ದನಗಳು ಬರುತ್ತವೆ. ಹಳ್ಳಿಕಾರು ಜಾತಿಯ ಹೋರಿಗಳಿಗೆ ಈ ಜಾತ್ರೆ ಪ್ರಸಿದ್ಧ. ಜಾತ್ರೆಗೆ ಸುಮಾರು ಎರಡು ಲಕ್ಷ ಜನ ಬರುತ್ತಾರೆ.

	ಚುಂಚನಕಟ್ಟೆಯ ಬಳಿ ಒಂದು ಸಹಕಾರ ಸಕ್ಕರೆ ಕಾರ್ಖಾನೆ ಸ್ಥಾಪಿತವಾಗುತ್ತಿದೆ.			(ಕೆ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ